ಕೋಟ: ಕೋಟ ಸಾಲಿಗ್ರಾಮ ರೋಟರಿ ಕ್ಲಬ್‌ನ ಮಾರ್ಗದರ್ಶನದಲ್ಲಿ ಇತ್ತೀಚೆಗೆ ವಿವೇಕಾ ಶಿಕ್ಷಣ ಸಂಸ್ಥೆಗಳ ಮೂರು ಪ್ರೌಢಶಾಲೆಗಳು ಹಾಗೂ ವಿವೇಕಾ ಪದವಿ ಪೂರ್ವ ಕಾಲೇಜಿನ ‘ಇಂಟರ್ಯಾಕ್ಟ್ ಕ್ಲಬ್’ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಅತ್ಯಂತ ಯಶಸ್ವಿಯಾಗಿ ಜರುಗಿತು.

ಕಾರ್ಯಕ್ರಮದ ವೇದಿಕೆಯಲ್ಲಿ ಕೋಟ ಸಾಲಿಗ್ರಾಮ ರೋಟರಿ ಕ್ಲಬ್ ಅಧ್ಯಕ್ಷರಾದ ಮಿಲ್ಟನ್ ಅಲ್ಮೇಡಾ, ಕಾರ್ಯದರ್ಶಿ ಶ್ರೀ ಕರುಣಾಕರ್, ಮುಖ್ಯ ಅತಿಥಿ ರೋಟೇರಿಯನ್ ಶ್ರೀ ಗಣೇಶ್ ಶೆಟ್ಟಿ, ರೋಟೇರಿಯನ್ ಶ್ರೀಮತಿ ಕುಸುಮಾ ಶೆಟ್ಟಿ, ವಿವಿಧ ವಿವೇಕಾ ಸಂಸ್ಥೆಗಳ ಮುಖ್ಯಸ್ಥರು ಹಾಗೂ ನೂತನವಾಗಿ ಪದಗ್ರಹಣ ಮಾಡಿದ ಇಂಟರ್ಯಾಕ್ಟ್ ಕ್ಲಬ್‌ನ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಇಂಟರ್ಯಾಕ್ಟ್ ಕ್ಲಬ್‌ನ ನೂತನ ಪದಾಧಿಕಾರಿಗಳಿಗೆ ಅಧಿಕೃತವಾಗಿ ಅಧಿಕಾರ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ವಿದ್ಯಾರ್ಥಿ ದೆಸೆಯಿಂದಲೇ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವಂತೆ ಹಾಗೂ ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ನೂತನ ಪದಾಧಿಕಾರಿಗಳಿಗೆ ಕರೆ ನೀಡಿದರು. ಅಲ್ಲದೆ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದಲ್ಲಿ ಇಂಟರ್ಯಾಕ್ಟ್ ಕ್ಲಬ್‌ನ ಪಾತ್ರ ಮತ್ತು ಪ್ರಾಮುಖ್ಯತೆಯ ಕುರಿತು ಬೆಳಕು ಚೆಲ್ಲಿದರು.



ರೋಟರಿ ಕ್ಲಬ್‌ನ ಸದಸ್ಯರು, ಸಂಸ್ಥೆಯ ಬೋಧಕ ಸಿಬ್ಬಂದಿ ಹಾಗೂ ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಮಾರಂಭವನ್ನು ಅರ್ಥಪೂರ್ಣ ಹಾಗೂ ಪ್ರೇರಣಾದಾಯಿಯಾಗಿಸಿದರು.
