K Jagadish Navada (Principal)
ಇತ್ತೀಚಿನ ವರ್ಷಗಳಲ್ಲಿ ಶೈಕ್ಷಣಿಕ ಗುಣಮಟ್ಟವು ಗಣನೀಯವಾಗಿ ಕುಂಠಿತವಾಗುತ್ತಿರುವುದು ಖೇದಕರ, ಇದು ಮುಂದುವರಿದಲ್ಲಿ ಭವಿಷ್ಯದಲ್ಲಿ ಸಮಸ್ಯೆಗಳು ಜಟಿಲವಾಗಿ ವಿಷಮ ಸ್ಥಿತಿಗೆ ತಲುಪುತ್ತದೆ, ಇಂದಿನ ಮಾಧ್ಯಮ, ಸಡಿಲವಾದ ಕಾನೂನು, ಪೋಷಕರಿಗೆ ಮಕ್ಕಳ ಮೇಲಿನ ಅತೀವ ಮೋಹ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿರದೇ, ಇನ್ನಷ್ಟು ನಿರ್ಭೀತಿಯಿಂದ ವ್ಯವಹರಿಸಲು ಸಹಕಾರಿಯಾಗುತ್ತಿದೆ, ಹಲವು ವಿದ್ಯಾರ್ಥಿಗಳು ತಮ್ಮಧ್ಯೇಯ , ಉದ್ದೇಶಗಳ ಬಗ್ಗೆ ಚಿಂತಿಸದೇ ಅಮೂಲ್ಯವಾದ ತಮ್ಮವಿದ್ಯಾರ್ಥಿ ಜೀವನವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ, ಇದು ವಿದ್ಯಾರ್ಥಿಗೆ, ಅವರ ಮನೆಯವರಿಗೆ ಮಾತ್ರವಲ್ಲದೇ ಸಮಾಜಕ್ಕೂ, ದೇಶಕ್ಕೂಮಾರಕವಾಗುತ್ತಿದೆ. ಈ ನಿಟ್ಟಿನಲ್ಲಿ ಕೇವಲ ಶಿಕ್ಷಕರು ಮಾತ್ರವಲ್ಲದೇ ಪೋಷಕರು, ಸಮಾಜ, ಇಲಾಖೆ ಮತ್ತು ಸರಕಾರ ಗಂಭೀರವಾಗಿ ಚಿಂತಿಸಿ, ಸೂಕ್ತ ಪರಿಹಾರವನ್ನು ಕಂಡುಕೊಳ್ಳಬೇಕು. ಇತ್ತೀಚಿನ ವರ್ಷಗಳಲ್ಲಿ ಶಿಕ್ಷಣವೆಂದರೆ ವಿದ್ಯಾರ್ಥಿಗಳನ್ನು ಕೇವಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರು ಮಾಡಿಸಿ, ಅವರಿಂದ ರ್ಯಾಂಕ್ ನ್ನು ನಿರೀಕ್ಷಿಸುವುದು ಆಗಿರುತ್ತದೆ. ಇದಕ್ಕಾಗಿ ಲಕ್ಷಾಂತರ ರೂಪಾಯಿಗಳನ್ನು ಪೋಷಕರಿಂದ ಸುಲಿಗೆ ಮಾಡುತ್ತಿರುವ ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಂಡಿದ್ದು, ಶಿಕ್ಷಣವು ವ್ಯಾಪಾರೀಕರಣವಾಗುತ್ತಿದೆ. ವಿದ್ಯಾರ್ಥಿಗಳ ಗುರಿ ಕೇವಲ ರ್ಯಾಂಕ್ ಗಳಿಸುವುದು ಮಾತ್ರವಲ್ಲ, ಅದರೊಂದಿಗೆ ನೈತಿಕ ಶಿಕ್ಷಣ, ಸಂಸ್ಕಾರ, ಸಂಸ್ಕೃತಿ, ಸಾಮಾಜಿಕ ಕಳಕಳಿ, ಸಾಮಾನ್ಯ ಜ್ಞಾನ, ವ್ಯಕ್ತಿತ್ವ ವಿಕಸನಕ್ಕೆ ಪೂರಕ ವಾತಾವರಣವನ್ನು ಸೃಷ್ಠಿಸುವ ಬದ್ಧತೆ ಮತ್ತು ಧೃತಿಗೆಡದೇ ಸಮಸ್ಯೆಗಳನ್ನು ಎದುರಿಸುವ, ಮನೋಸಂಯಮ ರೂಪಿಸುವ ಶಿಕ್ಷಣದ ಬಗ್ಗೆ ಶಿಕ್ಷಣ ಸಂಸ್ಥೆಗಳು ಗಮನಹರಿಸಲೇಬೇಕಾಗಿದೆ. ಪೋಷಕರು ಕೂಡ ತಮ್ಮ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯ ಬಗ್ಗೆ ಯೋಚಿಸಬೇಕಿದೆ ಹಾಗೂ ಇವೆಲ್ಲಾ ದೊರಕುವ ಶಿಕ್ಷಣ ಸಂಸ್ಥೆಗಳನ್ನು ಆಯ್ಕೆ ಮಾಡಿಕೊಳ್ಳಬೇಕಾದ ಗುರುತರವಾದ ಹೊಣೆಗಾರಿಕೆ ಪೋಷಕರ ಮೇಲಿರುತ್ತದೆ.
ಗುರು - ಹಿರಿಯರನ್ನು, ತಂದೆ ತಾಯಿಯನ್ನು, ಅತಿಥಿಗಳನ್ನು, ಮಹಿಳೆಯರನ್ನು, ಅಶಕ್ತರನ್ನು ಗೌರವದಿಂದ ಕಾಣುವ ಹೃದಯವ೦ತ ಸ೦ಸ್ಕೃತಿ ನಮ್ಮದು, ಮನೆಯೇ ಮೊದಲ ಪಾಠಶಾಲೆಯನ್ನುವಂತೆ ಇಂತಹ ಸಂಸ್ಕಾರವನ್ನು ಮಕ್ಕಳಿಗೆ ಪ್ರಾರಂಭದಲ್ಲಿ ಮನೆಯಲ್ಲೇ ನೀಡಬೇಕು, ಆದರೆ ಈಗ ಕುಟುಂಬದ ವಿಘಟನೆ, ಒತ್ತಡದ ಜೀವನ, ಮಕ್ಕಳಿಗೆ ಒಂದಿಷ್ಟು ಸಮಯವನ್ನು ನೀಡಲಾಗದ ಅಸಹಾಯಕತೆ, ಟಿ.ವಿ., ಮೊಬೈಲ್ ಗೀಳಿನಿಂದ ಮಕ್ಕಳು ನೈತಿಕ ಹಾಗೂ ಸಂಸ್ಕಾರಯುತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಪೋಷಕರ ಪಾತ್ರಗುರುತರವಾದದ್ದು ಸರಕಾರ ಇಲಾಖೆ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣವನ್ನು ನೀಡುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಪೋಷಕರು ಕೇವಲ ರ್ಯಾಂಕಿನ ಹಿಂದೆ ಬೀಳದೇ ತಮ್ಮ ಮಕ್ಕಳಿಗೆ ನೈತಿಕ ಮತ್ತು ಸಂಸ್ಕಾರಯುತ ಶಿಕ್ಷಣದ ಬಗ್ಗೆ ಯೋಚಿಸಬೇಕು ಹಾಗೂ ಇದಕ್ಕೆ ಮೊದಲ ಪ್ರಾಶಸ್ತ್ಯ ನೀಡುವ ಶಿಕ್ಷಣ ಸ೦ಸ್ಥೆಗಳನ್ನು ಆಯ್ಕೆಮಾಡಬೇಕು.ಇಲ್ಲವಾದಲ್ಲಿ ಶೈಕ್ಷಣಿಕ ಮತ್ತು ನೈತಿಕ ಅಧಃಪತನ ಖಂಡಿತ!!
.
ಶ್ರೀ ಕೆ. ಜಗದೀಶ ನಾವಡ
ಪ್ರಾಂಶುಪಾಲರು, ವಿವೇಕ ಪದವಿಪೂರ್ವ ಕಾಲೇಜು.