ವಿವೇಕ ವಿದ್ಯಾಸಂಸ್ಥೆಗಳ ಅಭಿವೃದ್ಧಿ ಕಾಮಗಾರಿಯಲ್ಲಿ ಒಂದಾದ ಆವರಣಗೋಡೆ ಇದರ ಉದ್ಘಾಟನಾ ಸಮಾರಂಭವು ಜರುಗಿತು. ಈ ಆವರಣಗೋಡೆಯ ನಾಮಫಲಕವನ್ನು ಚೀಫ್ ಜನರಲ್ ಮ್ಯಾನೇಜರ್, ಹೆಡ್ ಆಫೀಸ್, ಕರ್ನಾಟಕ ಬ್ಯಾಂಕ್, ಮಂಗಳೂರು ಇಲ್ಲಿನ ಶ್ರೀ ಎಂ. ರಾಘವೇಂದ್ರ ಭಟ್ ಇವರು ಅ
ನಾವರಣಗೊಳಿಸಿದರು.
ಅನಂತರ ಸಭಾಂಗಣದ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಮಾತನಾಡಿ ‘ಕೋಟ ವಿವೇಕ ವಿದ್ಯಾಸಂಸ್ಥೆ ನಮ್ಮ ಜಿಲ್ಲೆಯಲ್ಲಿ ಮಾತ್ರವಲ್ಲ, ಇಡೀ ರಾಜ್ಯದಲ್ಲೇ ಪ್ರಸಿದ್ಧಿಯನ್ನು ಪಡೆದಿದೆ. ಶಿಕ್ಷಣ ಹಾಗು ಶಿಸ್ತಿನಲ್ಲಿ ತನ್ನದೇ ಆದ ಛಾಪ್‍ನ್ನು ಮೂಡಿಸಿದೆ. ಇಲ್ಲಿ ವಿದ್ಯಾಭ್ಯಾಸ ಮಾಡಿದವರಲ್ಲಿ ಅನೇಕರು ದೇಶ-ವಿದೇಶಗಳಲ್ಲಿ ಉತ್ತುಂಗ ಸ್ಥಾನದಲ್ಲಿದ್ದಾರೆ. ಹಾಗೆಯೇ ಈ ವಿದ್ಯಾಸಂಸ್ಥೆಯು ಕರ್ನಾಟಕ ಬ್ಯಾಂಕಿಗೂ ಸಹ ಉತ್ತಮ, ದಕ್ಷ, ಅಧಿಕಾರಿಗಳನ್ನು ನೀಡಿದೆ ಎಂದು ಶ್ಲಾಘಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕೋಟ ವಿದ್ಯಾಸಂಘದ ಅಧ್ಯಕ್ಷರಾದ ಶ್ರೀ ಪಿ. ಪ್ರಭಾಕರ ಮಯ್ಯರು ವಹಿಸಿ ಮಾತನಾಡಿ ಆವರಣಗೋಡೆ ರಚನೆಯಲ್ಲಿ ಕರ್ನಾಟಕ ಬ್ಯಾಂಕಿನ ದೊಡ್ಡ ದೇಣಿಗೆಯನ್ನು ಸ್ಮರಿಸಿ ಕೃತಜ್ಞತೆಯನ್ನು ಸಲ್ಲಿಸಿದರು. ಕೋಟ ವಿದ್ಯಾಸಂಘದ ಕಾರ್ಯದರ್ಶಿ ಶ್ರೀ ಪಿ. ಸುಬ್ರಹ್ಮಣ್ಯ ಉಪಾಧ್ಯರು ಕೋಟ ವಿದ್ಯಾಸಂಸ್ಥೆಗಳಿಗೂ ಹಾಗು ಕರ್ನಾಟಕ ಬ್ಯಾಂಕಿಗೂ ಇರುವ ಅವಿನಾಭಾವ ಸಂಬಂಧವನ್ನು ತಿಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಅಸಿಸ್ಟೆಂಟ್ ಜನರಲ್ ಮ್ಯಾನೇಜರ್, ರಿಜೀನಲ್ ಆಫೀಸ್, ಕರ್ನಾಟಕ ಬ್ಯಾಂಕ್, ಉಡುಪಿ ಇಲ್ಲಿನ ಶ್ರೀಮತಿ ವಿದ್ಯಾಲಕ್ಷ್ಮಿ ಹಾಗು ಕರ್ನಾಟಕ ಬ್ಯಾಂಕಿನ ಯೋಜನಾ ಮತ್ತು ಅಬಿವೃದ್ಧಿ ವಿಭಾಗದ ಚೀಫ್ ಮ್ಯಾನೇಜರ್ ಆದ ಶ್ರೀ ಶ್ರೀನಿವಾಸ ದೇಶಪಾಂಡೆ, ಶ್ರೀ ವಾದಿರಾಜ ಹಾಗು ಪರಿಸರದ ಕರ್ನಾಟಕ ಬ್ಯಾಂಕ್ ಶಾಖಾ ಪ್ರಬಂಧಕರು ಕೂಡಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಆವರಣ ಗೋಡೆಯ ಮೊದಲ ಹಂತದ ನಿರ್ಮಾಣ ಕಾರ್ಯದಲ್ಲಿ ಕರ್ನಾಟಕ ಬ್ಯಾಂಕ್ 5 ಲಕ್ಷ ರೂಪಾಯಿಗಳ ಮೂಲ ಸಹಾಯಧನ ನೀಡಿ, ಈ ಮಹತ್ವಾಕಾಂಕ್ಷಿ ಯೋಜನೆಗೆ ಆರಂಭದಲ್ಲಿ ಚಾಲನೆಯನ್ನು ನೀಡಿತ್ತು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ. ಜಗದೀಶ ನಾವಡರು ಅತಿಥಿ-ಅಭ್ಯಾಗತರನ್ನು ಪರಿಚಯಿಸಿ ಸ್ವಾಗತಿಸಿದರು. ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಶ್ರೀಪತಿ ಹೇರ್ಳೆ, ಪ್ರೌಢಶಾಲಾ ವಿಭಾಗದ ಹಿರಿಯ ಶಿಕ್ಷಕರಾದ ಶ್ರೀ ವೆಂಕಟೇಶ ಉಡುಪರು ಉಪಸ್ಥಿತರಿದ್ದರು. ವಿವೇಕ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಕೆ. ಜಗದೀಶ ಹೊಳ್ಳರು ಧನ್ಯವಾದವನ್ನಿತ್ತರು. ಉಪನ್ಯಾಸಕಿ ಶ್ರೀ ಸಂಜೀವ ಜೀ. ಇವರು ಕಾರ್ಯಕ್ರಮ ನಿರ್ವಹಿಸಿದರು.
