ಜಿಲ್ಲಾ ಪ.ಪೂ. ವಾಣಿಜ್ಯಶಾಸ್ತ್ರ ಉಪನ್ಯಾಸಕರ ಕಾರ್ಯಾಗಾರ ಸಂಪನ್ನ

ಉಡುಪಿ ಜಿಲ್ಲಾ ಪದವಿಪೂರ್ವ ಕಾಲೇಜುಗಳ ವಾಣಿಜ್ಯಶಾಸ್ತ್ರ ಉಪನ್ಯಾಸಕರ ಪುನಶ್ಚೇತನ ಕಾರ್ಯಾಗಾರ ವಿವೇಕ ಪದವಿಪೂರ್ವ ಕಾಲೇಜು, ಕೋಟ ಇಲ್ಲಿ ಜರುಗಿತು.
ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶ್ರೀ ಸುಬ್ರಹ್ಮಣ್ಯ ಜಿ. ಜೋಷಿಯವರು ಕಾರ್ಯಾಗಾರದ ಉದ್ಘಾಟನೆಯನ್ನು ನೆರವೇರಿಸಿ, ಮಾತನಾಡಿ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾದ ಎನ್.ಸಿ.ಇ.ಆರ್.ಟಿ. ಪಠ್ಯಕ್ರಮದ ಭೋದನೆಯ ಅಗತ್ಯತೆಯನ್ನು ಹೇಳಿ, ಬದಲಾದ ಪಠ್ಯಕ್ರಮವನ್ನು ಪರಿಣಾಮಕಾರಿಯಾಗಿ ಭೋದಿಸುವಲ್ಲಿ ಉಪನ್ಯಾಸಕರು ಬದಲಾಯಿಸಿಕೊಳ್ಳಬೇಕಾದ ವಿಷಯ ಜ್ಞಾನದ ಪುನಶ್ಚೇತನವನ್ನು ತಿಳಿಸಿದರು.
ಮುಖ್ಯ ಅಭ್ಯಾಗತರಾಗಿ ಕೋಟ ವಿದ್ಯಾಸಂಘ (ರಿ.), ಕೋಟ ಇದರ ಅಧ್ಯಕ್ಷರಾದ ಸಿ.ಎ. ಪ್ರಭಾಕರ ಮೈಯ್ಯ ಅವರು ಮಾತನಾಡಿ, ಪಠ್ಯಕ್ರಮದ ಭೋದನೆಯ ಜೊತೆ-ಜೊತೆಗೆ ಪ್ರಾಯೋಗಿಕ ಜ್ಞಾನವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಿದರೆ, ಸಮಾಜಕ್ಕೆ ಅವರು ನೈಜ ಆಸ್ತಿಗಳಾಗಬಹುದು ಎಂದರು.
ಕಾಲೇಜಿನ ಪ್ರಾಂಶುಪಾಲ ಶ್ರೀ ಕೆ. ಜಗದೀಶ ನಾವಡರು ಅಧ್ಯಕ್ಷತೆ ವಹಿಸಿದ್ದು, ವಾಣಿಜ್ಯ ಶಾಸ್ತ್ರ ಉಪನ್ಯಾಸಕರ ವೇದಿಕೆಯ ಅಧ್ಯಕ್ಷ ಶ್ರೀ ಸಂಜೀವ ಗುಂಡ್ಮಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ವಿಜಯ ಕಾಲೇಜು, ಬೆಂಗಳೂರು ಇಲ್ಲಿನ ಹಿರಿಯ ಉಪನ್ಯಾಸಕರಾದ ಶ್ರೀ ಮಹಾಬಲೇಶ್ವರ ತುಂಗ ಬದಲಾದ ಪಠ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯ ಕಾರ್ಯದರ್ಶಿ ಶ್ರೀ ನಾರಾಯಣ ಪೈ ವಂದನಾರ್ಪಣೆಗೈದರು. ಉಪನ್ಯಾಸಕಿ ಶ್ರೀಮತಿ ವನಿತಾ ಪ್ರಾರ್ಥಿಸಿ, ಶ್ರೀಮತಿ ಅನಿತಾ ಹೊಳ್ಳ ಮತ್ತು ಲತಾ ಆಚಾರ್ ನಿರೂಪಿಸಿದರು.