ಕಲಿಕೆಯಲ್ಲಿ ಮಕ್ಕಳು ಮುಂದೆ ಬರಲು ಪೋಷಕರು ತಮ್ಮ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಬೇಕು: ಡಾ. ಶ್ರೀಮತಿ ಮಹಿಮಾ ಆಚಾರ್ಯ.
ಹದಿಹರೆಯದಲ್ಲಿ ಮಕ್ಕಳು ಸಾಹಸ ಪ್ರವೃತ್ತಿಯವರಾಗಿದ್ದು, ಸಮಾಜದಲ್ಲಿ ತಮ್ಮನ್ನು ಹೆಚ್ಚು ಗುರುತಿಸಿಕೊಳ್ಳಬೇಕು ಎನ್ನುವ ಮನೋಭಾವ ಹೊಂದಿರುತ್ತಾರೆ. ಪರಿಣಾಮವಾಗಿ ಅರಿಯದೆ ಮಕ್ಕಳು ತಪ್ಪುದಾರಿಗೆ ಇಳಿಯುತ್ತಾರೆ. ಪೋಷಕರು ತಮ್ಮ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆದಲ್ಲಿ, ಅವರನ್ನು ಸರಿದಾರಿಗೆ ತರಲು ಸಾಧ್ಯ. ಮನೆಯಲ್ಲಿಯೇ ತಯಾರಿಸಿದ ಹೆಚ್ಚು ಪ್ರೋಟಿನ್ ಇರುವ ಆಹಾರವನ್ನು ನೀಡುವುದರಿಂದ, ಕಲಿಕೆಗೆ ಸಂಬಂಧಿಸಿದ ಟೈಮ್ಟೇಬಲ್ ಪ್ರಕಾರ ಓದುವಂತೆ ಪ್ರೇರೇಪಿಸಿ, ಆತ್ಮವಿಶ್ವಾಸ ಹೆಚ್ಚುವಂತೆ ನೋಡಿಕೊಳ್ಳುವುದರಿಂದ , ಮನೆಯಲ್ಲಿ ಕಲಿಕೆಯ ವಾತಾವರಣವನ್ನು ನಿರ್ಮಿಸುವುದರಿಂದ ಮಕ್ಕಳು ಕಲಿಕೆಯಲ್ಲಿ ಹಿಂದೆ ಬೀಳಲಾರರು. ತಮ್ಮ ಮಕ್ಕಳನ್ನು ಇತರ ಮಕ್ಕಳೊಂದಿಗೆ ಹೋಲಿಸಿದಾಗ ಅವರ ಆತ್ಮವಿಸ್ವಾಸ ಕುಗ್ಗುತ್ತದೆ. ಪರಿಣಾಮವಾಗಿ ಕಲಿಕೆಯಲ್ಲಿ ಹಿಂದೆ ಬೀಳುತ್ತಾರೆ. ಮನೆಯವರ ವರ್ತನೆಯು ಮಕ್ಕಳ ಕಲಿಕೆಯ ಮೇಲೆ ಪ್ರಭಾವ ಬೀರುತ್ತದೆ. ಪೋಷಕರು ತಮ್ಮ ಗುರಿಯನ್ನು ಮಕ್ಕಳ ಮೂಲಕ ತಲುಪಲು ಯತ್ನಿಸಿದಾಗ ಮಕ್ಕಳು ಕಲಿಕೆಯಲ್ಲಿ ಹಿಂದೆ ಬೀಳುತ್ತಾರೆ ಎಂದು ಡಾ. ಮಹಿಮ ಆಚಾರ್ಯ ಅವರು ವಿವೇಕ ಬಾಲಿಕಾ ಪ್ರೌಢಶಾಲೆ ಮತ್ತು ಬಾಲಕರ ಪ್ರೌಢಶಾಲೆಗಳ ಆಪ್ತಸಮಾಲೋಚನಾ ಸಂಘದ ವತಿಯಿಂದ ಏರ್ಪಡಿಸಿದ ಪೋಷಕರ ಸಭೆಯಲ್ಲಿ ‘ಮಕ್ಕಳ ಕಲ್ಲಿಕೆಯಲ್ಲಿ ಪೋಷಕರ ಪಾತ್ರ’ ಎಂಬ ವಿಷಯದ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಪೋಷಕರ ಅನೇಕ ಸಮಸ್ಯೆಗಳಿಗೆ ಸಮಾಧಾನವನ್ನು ನೀಡಿದರು. ಅಲ್ಲದೆ ವಿದ್ಯಾರ್ಥಿಗಳು ತಮ್ಮ ಆತ್ಮವಿಸ್ವಾಸ ಬೆಳೆಸಿಕೊಂಡು ಹೆಚ್ಚು ಅಂಕವನ್ನು ಗಳಿಸುವ ವಿಧಾನವನ್ನು ದೃಶ್ಯ ಮಾಧ್ಯಮದ ಮೂಲಕ ವಿದ್ಯಾರ್ಥಿಗಳಿಗೆ ತಿಳಿಹೇಳಿದರು. ಪ್ರಾಂಶುಪಾಲ ಶ್ರೀ ಜಗದೀಶ ನಾವಡ ಎಲ್ಲರನ್ನು ಸ್ವಾಗತಿಸಿದರು. ಹಿರಿಯ ಶಿಕ್ಷಕ ಶ್ರೀ ವೆಂಕಟೇಶ ಉಡುಪ ಕಾರ್ಯಕ್ರಮದ ಉದ್ದೇಶವನ್ನು ತಿಳಿಸಿದರು. ಮುಖ್ಯಶಿಕ್ಷಕರಾದ ಶ್ರೀ ಜಗದೀಶ ಹೊಳ್ಳ ಧನ್ಯವಾದಗೈದರು. ಶ್ರೀ ಪ್ರೇಮಾನಂದ ಕಾರ್ಯಕ್ರಮವನ್ನು ನಿರೂಪಿಸಿದರು.