ಕೋಟ: ಕೋಟ ವಿದ್ಯಾಸಂಘದ ಆಡಳಿತಕ್ಕೊಳಪಟ್ಟ ವಿವೇಕ ಬಾಲಕಿಯರ ಪ್ರೌಢಶಾಲೆಯ ಮುಖ್ಯಶಿಕ್ಷಕರಾಗಿ ದೀರ್ಘಕಾಲ ಸೇವೆ ಸಲ್ಲಿಸಿ, ಇತ್ತೀಚೆಗೆ ನಿವೃತ್ತರಾದ ಶ್ರೀ ವೆಂಕಟೇಶ ಉಡುಪ ಅವರಿಗೆ ಸಂಸ್ಥೆಯ ಮಹಾತ್ಮ ಗಾಂಧಿ ಸ್ಮಾರಕ ಮಂದಿರದಲ್ಲಿ ಅತ್ಯಂತ ಭಾವನಾತ್ಮಕ ಹಾಗೂ ಸಡಗರದ ಸನ್ಮಾನ ಮತ್ತು ಬೀಳ್ಕೊಡುಗೆ ಸಮಾರಂಭ ಜರುಗಿತು.
ಕಾರ್ಯಕ್ರಮದಲ್ಲಿ ತಮ್ಮ ಅಧ್ಯಾಪನದ ಅವಧಿಯ ಹಳೆಯ ನೆನಪುಗಳನ್ನು ಮೆಲುಕು ಹಾಕಿದ ನಿವೃತ್ತ ಮುಖ್ಯಶಿಕ್ಷಕ ಶ್ರೀ ವೆಂಕಟೇಶ ಉಡುಪ ಅವರು, “ವಿವೇಕವೆಂದರೆ ಬರಿಯ ಶಾಲೆಯಲ್ಲ, ಅದು ನನ್ನ ಪಾಲಿಗೆ ಬಂಧನ ರಹಿತ ಸ್ವರ್ಗವಾಗಿತ್ತು” ಎಂದು ಸ್ಮರಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೋಟ ವಿದ್ಯಾಸಂಘದ ಅಧ್ಯಕ್ಷರಾದ ಶ್ರೀ ಪಿ. ಭಾಸ್ಕರ ಹಂದೆ ಅವರು, ಉಡುಪರ ಶ್ರೇಷ್ಠ ಸೇವೆಯನ್ನು ಸ್ಮರಿಸಿ, ಮುಂದಿನ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು.
ಶ್ರೀ ಎಂ. ರಾಮದೇವ ಐತಾಳ್ (ಕಾರ್ಯದರ್ಶಿ, ಕೋಟ ವಿದ್ಯಾಸಂಘ): ಶ್ರೇಷ್ಠ ಶಿಕ್ಷಕರಾಗಿ ಸಮರ್ಪಣಾ ಮನೋಭಾವದಿಂದ ಮಾಡಿರುವ ಅಧ್ಯಾಪನ ವಿವೇಕ ಸಂಸ್ಥೆಯ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಕೊಂಡಾಡಿದರು.
ಶ್ರೀ ಮಂಜುನಾಥ ಉಪಾಧ್ಯ (ಜೊತೆ ಕಾರ್ಯದರ್ಶಿ): ವೈಜ್ಞಾನಿಕ ಮನೋಭಾವವನ್ನು ಬೆಳೆಸಿದ ಶ್ರೇಷ್ಠ ಶಿಕ್ಷಕರಾಗಿ, ಆಡಳಿತ ಮಂಡಳಿಯ ಎಲ್ಲರ ಪ್ರೀತಿಗೆ ಪಾತ್ರರಾದ ಉಡುಪರ ಸೇವೆಯನ್ನು ಕೊಂಡಾಡಿದರು. ಇದೇ ವೇಳೆ, ಬಾಲಕಿಯರ ಪ್ರೌಢಶಾಲೆಯ ಮುಂದಿನ ಮುಖ್ಯಶಿಕ್ಷಕರಾಗಿ ಅಧಿಕಾರ ಸ್ವೀಕರಿಸಲಿರುವ ಶ್ರೀ ಪ್ರೇಮಾನಂದ ಹಾಗೂ ವಿವೇಕ ಪದವಿಪೂರ್ವ ಕಾಲೇಜಿನ ಹೈಸ್ಕೂಲ್ ವಿಭಾಗದಲ್ಲಿ ಹಿರಿಯ ಸಹಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಲಿರುವ ಶ್ರೀಮತಿ ರತಿ ಅವರಿಗೆ ಶುಭ ಕೋರಿದರು.
ಸಮಾರಂಭದಲ್ಲಿ ಹಿರಿಯ ಸಹಶಿಕ್ಷಕ ಶ್ರೀ ಪ್ರೇಮಾನಂದ ಹಾಗೂ ಅಧ್ಯಾಪಕರಾದ ಶ್ರೀ ನರೇಂದ್ರ ಕುಮಾರ್ ಅವರು ವೆಂಕಟೇಶ ಉಡುಪರ ಕುರಿತು ಮಾತನಾಡಿ, ಅವರ ಶೈಕ್ಷಣಿಕ ಕೊಡುಗೆಯನ್ನು ಸ್ಮರಿಸಿದರು.
ಸ್ವಾಗತ: ಶ್ರೀ ಕೆ. ಜಗದೀಶ ನಾವಡ (ಪ್ರಾಂಶುಪಾಲರು, ವಿವೇಕ ಪದವಿಪೂರ್ವ ಕಾಲೇಜು)
ಪ್ರಾರ್ಥನೆ: ಶ್ರೀಮತಿ ಅನಿತಾ ಹೊಳ್ಳ
ನಿರೂಪಣೆ: ಶ್ರೀಮತಿ ನಳಿನಾಕ್ಷಿ
ವಂದನಾರ್ಪಣೆ: ಶ್ರೀಮತಿ ಪ್ರೀತಿರೇಖಾ (ಮುಖ್ಯಶಿಕ್ಷಕರು, ವಿವೇಕ ಆಂಗ್ಲಮಾಧ್ಯಮ ಪ್ರೌಢಶಾಲೆ)
ವೇದಿಕೆಯಲ್ಲಿ ವಿದ್ಯಾಸಂಘದ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಶ್ರೀಪತಿ ಹೇರ್ಳೆ, ಶ್ರೀ ವಸಂತ ಶೆಟ್ಟಿ, ಶ್ರೀ ಲಕ್ಷ್ಮೀನಾರಾಯಣ ಕಾರಂತ ಹಾಗೂ ಪ್ರೌಢಶಾಲಾ ವಿಭಾಗದ ಹಿರಿಯ ಸಹಶಿಕ್ಷಕ ಶ್ರೀ ಪ್ರೇಮಾನಂದ, ವಿವೇಕ ಆಂಗ್ಲಮಾಧ್ಯಮ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಶ್ರೀಮತಿ ಪ್ರೀತಿರೇಖಾ ಉಪಸ್ಥಿತರಿದ್ದರು.