‘ಒಂದು ಕೆಲಸವನ್ನು ಸಾಮಾನ್ಯವಾಗಿ ಮಾಡುವುದು ಸಹಜ. ಆದರೆ, ಅದನ್ನು ತನ್ನದೇ ಆದ ರೀತಿಯಲ್ಲಿ, ಶೈಲಿಯಲ್ಲಿ, ವಿಶಿಷ್ಟ ರೀತಿಯಲ್ಲಿ ಯೋಚಿಸಿ, ಮಾಡುವುದೇ ಸೃಜನಶೀಲತೆ, ಪ್ರತಿಯೊಬ್ಬ ವ್ಯಕ್ತಿಯು ಸೃಜನಶೀಲನಾಗಿರುತ್ತಾನೆ. ತನ್ನಲ್ಲಿರುವ ಕೌಶಲವನು ಉಪಯೋಗಿಸಿಕೊಂಡು ತನ್ನತನವನ್ನು ಅದರಲ್ಲಿ ತೋರಿಸಬೇಕು’ ಎಂದು ವಿವೇಕ ವಿದ್ಯಾಸಂಸ್ಥೆಯ ಹಿಂದಿನ ವಿದ್ಯಾರ್ಥಿಯಾದ ಪ್ರಸ್ತುತ ಬೆಂಗಳೂರಿನ ಸೀಮನ್ಸ್ ಕಂಪೆನಿ ಉದ್ಯೋಗಿಯಾಗಿರುವ ಶ್ರೀ ವಿದ್ಯಾಭೂಷಣ ಹಂದೆಯವರು ತಿಳಿಸಿದರು.
ಅವರು ಕೋಟ ವಿವೇಕ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಸೃಜನಶೀಲ ಮತ್ತು ಸಂವಹನ ತರಬೇತಿಯನ್ನು ನೀಡುತ್ತಾ ಮಾತನಾಡಿದರು. ಕೆಲವು ಪ್ರಾಯೋಗಿಕ ವಿಷಯಗಳ ಮೂಲಕ ಕೌಶಲವನ್ನು ಹೇಗೆ ಅಭಿವೃದ್ಧಿ ಪಡೆಸಿಕೊಳ್ಳಬಹುದೆಂದು ತಿಳಿಸಿಕೊಟ್ಟರು. ಹಾಗೆಯೇ ವಿದ್ಯಾರ್ಥಿಗಳು ಉತ್ತಮ ಸಂವಹನ ಕಲೆಯನ್ನು ಬೆಳೆಸಿಕೊಳ್ಳಬೇಕು ಉತ್ತಮ ಸಂವಹನೆಯಿಂದ ಮನುಷ್ಯ ತನ್ನ ಜೀವನದಲ್ಲಿ ಹಾಗು ಔದ್ಯೊಗಿಕ ಕ್ಷೇತ್ರದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯ. ಇನ್ನೊಬ್ಬರ ಮಾತನ್ನು ಕೇಳುವಾಗ ಸರಿಯಾಗಿ ಕೇಳಿ ಅರ್ಥ ಮಾಡಿಕೊಂಡು ಮತ್ತೊಬ್ಬರಿಗೆ ಅದನ್ನು ಹೇಳಿದರೆ ಮಾತ್ರ ಉತ್ತಮ ಸಂವಹನೆ ಮಾಡಲು ಸಾಧ್ಯ ಎಂದು ಪ್ರಾಯೋಗಿಕವಾಗಿ ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ. ಜಗದೀಶ ನಾವಡರು ಶ್ರೀ ವಿದ್ಯಾಭೂಷಣ ಹಂದೆಯವರನ್ನು ಪರಿಚಯಿಸಿ ಸ್ವಾಗತಿಸಿದರು. ಉಪನ್ಯಾಸಕರಾದ ಶ್ರೀ ಶಿವಪ್ರಸಾದ ಶೆಟ್ಟಿಗಾರ್ ಕಾರ್ಯಕ್ರಮ ನಿರ್ವಹಿಸಿ ಧನ್ಯವಾದವನ್ನಿತ್ತರು.
