ಸಮಾಜ ಸೇವಾ ಸಂಘ ಉದ್ಘಾಟನೆ

ಕೋಟ : ವಿವೇಕ ಪದವಿಪೂರ್ವ ಕಾಲೇಜಿನ ಸಮಾಜ ಸೇವಾ ಸಂಘದ ಉದ್ಘಾಟನಾ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ಜರುಗಿತು.
ಉದ್ಘಾಟಕರಾಗಿ ರೋ| ಎಚ್. ಇಬ್ರಾಹಿಂ ಸಾಹೇಬ್, ಸಮಾಜಸೇವಕರು, ಹಂಗಾರಕಟ್ಟೆ, ಇವರು ದೀಪ ಬೆಳಗಿಸಿ ಉದ್ಘಾಟಿಸಿದರು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, “ಮನುಷ್ಯ ಸಮಾಜಜೀವಿ. ಸಮಾಜವನ್ನು ಬಿಟ್ಟು ಬದುಕಲಾರ. ಏಕಾಂಗಿಯೂ ಇರಲಾರ. ಸಮಾಜದಲ್ಲಿ ಜೀವಿಸುವಾಗ ಪರಸ್ಪರ ಸ್ನೇಹ, ಸೌಹಾರ್ದ, ಸೇವಾ ಮನೋಭಾವ ಇವುಗಳು ಅತೀ ಮುಖ್ಯ. ‘ಸೇವಾ ಹೀ ಪರಮೋ ಧಮಃ” ಎಂಬ ಉಕ್ತಿಯಂತೆ ನಾವೆಲ್ಲರೂ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ನಮ್ಮ ಜೀವನದಲ್ಲಿ ಸ್ವಲ್ಪ ಕಾಲವನ್ನಾದರೂ ಸಮಾಜಸೇವೆಗೆ ಅರ್ಪಿಸಬೇಕು. ಸಮಾಜದ ನಾಗರಿಕರಾಗಿ ನಮಗೆ ಸೇವೆ ನಮ್ಮ ಕರ್ತವ್ಯವಾಗಬೇಕು ಎಂದು ತಿಳಿಸಿ, ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ಸೇವಾಗುಣಗಳನ್ನು ರೂಢಿಸಿಕೊಂಡು ಭವಿಷ್ಯದಲ್ಲಿ ಉತ್ತಮ ಸಮಾಜಮುಖಿಯಾಗಿ ಬದುಕಬೇಕೆಂದು ತಿಳಿಸುತ್ತಾ ಸೇವೆಯಿಂದ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕೆಂದು ನುಡಿದರು.
ಸಮಾರಂಭದ ಮುಖ್ಯ ಅತಿಥಿ ವಿದ್ಯಾಸಂಸ್ಥೆಯ ಹಿಂದಿನ ವಿದ್ಯಾರ್ಥಿ ಶ್ರೀ ಪಂಜು ಪೂಜಾರಿ ಮಾತನಾಡಿ, ಸಮಾಜಸೇವೆಯಲ್ಲಿ ತೊಡಗಿಸಿಕೊಂಡ ಅನೇಕ ಗಣ್ಯವ್ಯಕ್ತಿಗಳ ಹೆಸರನ್ನು ನೆನಪಿಸಿಕೊಂಡು ವಿದ್ಯಾರ್ಥಿಗಳು ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿ, ಶುಭ ಹಾರೈಸಿದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ. ಜಗದೀಶ ನಾವಡರು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಸಮಾಜಸೇವಾಸಂಘದ ಅಧ್ಯಕ್ಷ ಆಕಾಶ ಸ್ವಾಗತಿಸಿ, ಕಾರ್ಯದರ್ಶಿ ಪೂಜಾ ಧನ್ಯವಾದವನ್ನಿತ್ತರು.
ವಿದ್ಯಾರ್ಥಿನಿ ಯಜುಷಾ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಶ್ರೀ ಜಿ. ಅಶೋಕಕುಮಾರ ಶೆಟ್ಟಿ ಕಾರ್ಯಕ್ರಮ ಸಂಯೋಜಿಸಿದ್ದರು.

Post comment

Your email address will not be published. Required fields are marked *

Copyright © 2016 Kota Vidya Sangha (R.), All rights reserved. Developed By: CoastalLive.com URL Counter