ಶಿಕ್ಷಕರ ದಿನಾಚರಣೆ – ಗುರುವಂದನೆ, ಅಭಿವಂದನೆ

ಕೋಟ: ‘ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದ, ಹಾಗು ಶ್ರೇಷ್ಠವಾದ ವೃತ್ತಿಯಾಗಿದೆ. ರಕ್ಷಕರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಮಹಾನ್ ವ್ಯಕ್ತಿಗಳೇ ಆಗಿರುತ್ತಾರೆ. ಶಿಕ್ಷಕರು ತಾಯಿಯ ತಾಳ್ಮೆಯನ್ನು ಬೆಳೆಸಿಕೊಂಡು, ನೈತಿಕ ಬಲದೊಂದಿಗೆ ಪಾಠ-ಪ್ರವಚನದಲ್ಲೇ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು’ ಎಂದು ನಿವೃತ್ತ ಉಪನ್ಯಾಸಕ, ಲೇಖಕ, ಚಿಂತಕ, ವಾಗ್ಮಿ ಶ್ರೀ ಕೋ. ಶಿವಾನಂದ ಕಾರಂತರು ತಿಳಿಸಿದರು.
ಅವರು ಕೋಟ ವಿದ್ಯಾಸಂಘ ಹಾಗು ವಿವೇಕ ವಿದ್ಯಾಸಂಸ್ಥೆಗಳು ಶಿಕ್ಷಕರ ದಿನಾಚರಣೆಯ ಅಂಗವಾಗಿ ಪ್ರತಿ ವರ್ಷ ನಡೆಸುವ ಪರಿಸರದ ಪೆÇೀಷಕ ಪ್ರಾಥಮಿಕ ಶಾಲೆಗಳಲ್ಲಿ ಸೇವೆ ಸಲ್ಲಿಸಿ, ನಿವೃತ್ತರಾದ ಶಿಕ್ಷಕರನ್ನು ಗುರುತಿಸಿ ಸಂಮ್ಮಾನಿಸುವ ‘ಗುರುವಂದನೆ-ಅಭಿವಂದನೆ’ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ನೀಡುತ್ತಾ ಮಾತನಾಡಿದರು. ಶಿಕ್ಷಕರು ಸ್ವ-ಅಧ್ಯಯನ ಪ್ರವೃತ್ತಿಯುಳ್ಳವರಾಗಿರಬೇಕು. ತರಗತಿಯಲ್ಲಿ ವಿದ್ಯಾರ್ಥಿಗಳ ಕುರಿತಾಗಿ ಸಹನೆ, ತಾಳ್ಮೆಯನ್ನು ಬೆಳೆಸಿಕೊಳ್ಳಬೇಕು. ಶಿಕ್ಷಕ ತಾನು ಮೊದಲು ನೈತಿಕ ಬಲವುಳ್ಳರಾಗಿರಬೇಕು. ಒಂದು ವಿಷಯದ ಕುರಿತಾಗಿ ನಿಖರ, ಸ್ಪಷ್ಟ ಮಾಹಿತಿಯನ್ನು ಹೊಂದಿರಬೇಕು. ಹಾಗೇ ಅಧ್ಯಾಪಕ ತಾನೇ ಸರ್ವಜ್ಞ ಎಂಬ ಭಾವನೆ ಹೊಂದಲೇ ಬಾರದು. ಏಕೆಂದರೆ ಕೆಲವು ಬಾರಿ ವಿದ್ಯಾರ್ಥಿಗಳಿಂದಲೂ ನಾವು ಪಾಠ ಕಲಿಯಬೇಕಾದ ಪ್ರಸಂಗ ಬರುತ್ತದೆ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕೋಟ ವಿದ್ಯಾಸಂಘದ ಅಧ್ಯಕ್ಷರಾದ ಶ್ರೀ ಪಿ. ಪ್ರಭಾಕರ ಮೈಯ್ಯರು ವಹಿಸಿ, ಶಿಕ್ಷಕ ದಿನಾಚರಣೆಯ ಮಹತ್ವವನ್ನು ವಿವರಿಸಿ, ಶಿಕ್ಷಕರು ಶ್ರೇಷ್ಠ ವೃತ್ತಿಯ ಪವಿತ್ರತೆಯನ್ನು ಕಾಪಾಡಿಕೊಂಡು ಬರುವಲ್ಲಿ ಪರಿಶ್ರಮವಹಿಸಬೇಕೆಂದು ತಿಳಿಸಿದರು. ಸಮಾರಂಭದ ಅಭ್ಯಾಗತರಾಗಿ ಕೋಟ ವಿದ್ಯಾಸಂಘದ ಕಾರ್ಯದರ್ಶಿ ಶ್ರೀ ಪಿ. ಸುಬ್ರಹ್ಮಣ್ಯ ಉಪಾಧ್ಯ ಮತ್ತು ಸರಕಾರಿ ಪ.ಪೂ. ಕಾಲೇಜು, ಬ್ರಹ್ಮಾವರ ಇಲ್ಲಿನ ಉಪಪ್ರಾಂಶುಪಾಲರಾದ ಶ್ರೀ ಬಿ.ಟಿ. ನಾಯಕ್ ಆಗಮಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಪರಿಸರದ ಪ್ರಾಥಮಿಕ ಶಾಲೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀ ಶಂಕರನಾರಾಯಣ ಶೆಟ್ಟಿಗಾರ್, ನಿವೃತ್ತ ಮುಖ್ಯೋಪಾಧ್ಯಾಯ, ಸ.ಹಿ.ಪ್ರಾ.ಶಾಲೆ, ಮೂಡುಗಿಳಿಯಾರು, ಶ್ರೀ ಸುರೇಂದ್ರ ಶೆಟ್ಟಿ, ನಿವೃತ್ತ ಮುಖ್ಯೋಪಾಧ್ಯಾಯ, ವಿವೇಕಾನಂದ ಹಿ. ಪ್ರಾ.ಶಾಲೆ, ಅಚ್ಲಾಡಿ, ಶ್ರೀಮತಿ ಎಲ್. ಸಾವಿತ್ರಮ್ಮ, ನಿವೃತ್ತ ಮುಖ್ಯೋಪಾಧ್ಯಾಯರು, ಸ.ಹಿ.ಪ್ರಾ.ಶಾಲೆ, ಮಣೂರು, ಶ್ರೀಮತಿ ಶಾರದಾ ಎಸ್. ನಾೈರಿ, ಸ.ಹಿ.ಪ್ರಾ.ಶಾಲೆ, ಗುಂಡ್ಮಿ, ಶ್ರೀಮತಿ ಅಕ್ಕಯ್ಯ ಹೊಸಾಳ, ಸ.ಹಿ.ಪ್ರಾ.ಶಾಲೆ,ಗುಂಡ್ಮಿ, ಶ್ರೀ ಸಂಜೀವ ಶೆಟ್ಟಿ, ಆರ್.ಪಿ.ಹಿ.ಪ್ರಾ.ಶಾಲೆ, ಮಣೂರು ಈ ಆರು ಮಂದಿ ನಿವೃತ್ತ ಶಿಕ್ಷಕರನ್ನು ಸಂಮ್ಮಾನಿಸಲಾಯಿತು.
ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ. ಜಗದೀಶ ನಾವಡರು ಪ್ರಸ್ತಾವನೆಯೊಂದಿಗೆ ಅತಿಥಿ ಅಭ್ಯಾಗತರನ್ನು ಪರಿಚಯಿಸಿ ಸ್ವಾಗತಿಸಿದರು. ಸಂಮ್ಮಾನಿತರ ಪರವಾಗಿ ಶ್ರೀ ಶಂಕರನಾರಾಯಣ ಶೆಟ್ಟಿಗಾರ್, ಶ್ರೀ ಸುರೇಂದ್ರ ಶೆಟ್ಟಿ, ಶ್ರೀಮತಿ ಎಲ್. ಸಾವಿತ್ರಮ್ಮ ಇವರುಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಆಂಗ್ಲಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಶ್ರೀ ಶ್ರೀಪತಿ ಹೇರ್ಳೆ, ಹಿರಿಯ ಶಿಕ್ಷಕ ಶ್ರೀ ಎ. ವೆಂಕಟೇಶ ಉಡುಪ ಉಪಸ್ಥಿತರಿದ್ದರು. ಶ್ರೀಮತಿ ಚಂದ್ರಕಲಾ ಕಾರ್ಯಕ್ರಮ ನಿರ್ವಹಿಸಿದರು. ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಶ್ರೀ ಕೆ. ಜಗದೀಶ ಹೊಳ್ಳ ಧನ್ಯವಾದವನ್ನಿತ್ತರು.

Post comment

Your email address will not be published. Required fields are marked *

Copyright © 2016 Kota Vidya Sangha (R.), All rights reserved. Developed By: CoastalLive.com URL Counter